ಥಾಂಟ್, ಊ
1909 - 1974.  ವಿಶ್ವಸಂಸ್ಥೆಯ ಮೂರನೆಯ ಮಹಾಕಾರ್ಯದರ್ಶಿ.  ಆ ಸ್ಥಾನಕ್ಕೆ ಆಯ್ಕೆಯಾದ ವರ್ಣೀಯರಲ್ಲಿ ಮೊದಲಿಗರು. 

ಅವರಿಗೆ ಹಿಂದೆ ಮಹಾ ಕಾರ್ಯದರ್ಶಿಯಾಗಿದ್ದ ಡಾಗ್ ಹ್ತಾಮಾರ್‍ಷಲ್ಡರ ಆಕಸ್ಮಿಕ ಮರಣದ ಅನಂತರ ಥಾಂಟ್ ಅವರು 1961ರ 3 ರಂದು ವಿಶ್ವಸಂಸ್ಥೆಯ ತಾತ್ಕಾಲಿಕ ಮಹಾ ಕಾರ್ಯದರ್ಶಿಗಳಾದರು.  ಅನಂತರ 1962ರ ನವೆಂಬರ್ 30 ರಂದು ಸರ್ವಾನುಮತದಿಂದ ಚುನಾಯಿತರಾದರು.

	ಬರ್ಮದ ಮೌಬಿನ್ ಜಿಲ್ಲೆಯ  ಪಾಂಟಾನಾವದಲ್ಲಿ ಇವರು 1909ರ ಜನವರಿ 22ರಂದು ಜನಿಸಿದರು.  ಪಾಂಟಾನಾವಿನ ರಾಷ್ಟ್ರೀಯ ವಿದ್ಯಾಶಾಲೆಯಲ್ಲೂ ಅನಂತರ ರಂಗೂನ್ ವಿಶ್ವವಿದ್ಯಾಲಯದಲ್ಲೂ  ವಿದ್ಯಾರ್ಥಿಯಾಗಿದ್ದರು.  ತಂದೆಯ ಮರಣದಿಂದ ಪದವಿ ಅಧ್ಯಯನವನ್ನು ಮುಂದುವರಿಸಲಾರದೆ ಇವರು ಪಾಂಟಾನಾವಿಗೆ ಹಿಂತಿರುಗಬೇಕಾಯಿತು(1931).  ಊ ಥಾಂಟ್ ರಾಷ್ಟ್ರೀಯ  ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾಗಿ ಸೇರಿ ಕ್ರಮೇಣ ಅದರ ಮುಖ್ಯೋಪಾಧ್ಯಾಯರಾದರು.  ಮುಂದೆ ಬರ್ಮದ ಪ್ರಧಾನಿಯಾದ ಯು ನು ಅವರ ನಿಕಟಸಂಪರ್ಕ ಅವರಿಗೆ ಇಲ್ಲಿ ಒದಗಿತು.  ತಾವು ಪತ್ರಿಕೋದ್ಯಮಿಯಾಗಬೇಕೆಂಬ ಗೀಳು ಇವರಿಗೆ ಮೊದಲಿನಿಂದಲೂ ಇತ್ತು.  1942ರಲ್ಲಿ ಜಪಾನೀಯರು ಬರ್ಮವನ್ನು ಆಕ್ರಮಿಸಿಕೊಂಡಾಗ ಊ ಥಾಂಟ್ ಆ ಸರ್ಕಾರದಲ್ಲಿ ಶಿಕ್ಷಣ ಪುನವ್ರ್ಯವಸ್ಥಾ ಸಮಿತಿಯ ಕಾರ್ಯದರ್ಶಿಗಳಾದರು.  ಬರ್ಮ ಮತ್ತೆ ಬ್ರಿಟಿಷರ ಅಧೀನಕ್ಕೆ ಬಂದ ಇವರು ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸಿದರು.  1947ರಲ್ಲಿ ಸ್ವತಂತ್ರವಾಯಿತು.  ಮಾರನೆಯ ವರ್ಷ ಬರ್ಮ ದೇಶ ವಿಶ್ವಸಂಸ್ಥೆಯ 58ನೆಯ ಸದಸ್ಯ ರಾಷ್ಟ್ರವಾಗಿ ಪ್ರವೇಶ ಪಡೆಯಿತು.  ಊ ಥಾಂಟ್ 1947ರಲ್ಲಿ ಬರ್ಮ ಸರ್ಕಾರದ ವಾರ್ತಾ ಇಲಾಖೆಯ ಮತ್ತು 1948ರಲ್ಲಿ ಪ್ರಸಾರ ಇಲಾಖೆಯ ಮುಖ್ಯಾಧಿಕಾರಿಯಾಗಿಯೂ ಅನಂತರ 1949 ರಿಂದ 1957ರ ವರೆಗೆ ಆ ಇಲಾಖೆಗಳ ಕಾರ್ಯದರ್ಶಿಯಾಗಿಯೂ ಇದ್ದರು.  1952ರಲ್ಲಿ ಬರ್ಮ ಸರ್ಕಾರದ  ಪ್ರತಿನಿಧಿಯಾಗಿ ವಿಶ್ವ ಸಂಸ್ಥೆಯ ಏಳನೆಯ ಮಹಾಧಿವೇಶನದಲ್ಲಿ ಭಾಗವಹಿಸಿದ್ದರು.  ಮುಂದೆ ಅನೇಕ ಸಮ್ಮೇಳನಗಳಲ್ಲಿ ಇವರು ಬರ್ಮದ ಪ್ರತಿನಿಧಿಯಾಗಿಯೂ ಪ್ರಧಾನಿಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದರು.  1957ರಲ್ಲಿ ವಿಶ್ವಸಂಸ್ಥೆಗೆ ಇವರು ಬರ್ಮದ ಕಾಯಂ ಪ್ರತಿನಿಧಿಯಾಗಿ ನೇಮಿತರಾದರು.  1959ರಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯ ಉಪಾಧ್ಯಕ್ಷರಾದರು.   ವಿಶ್ವ ಸಂಸ್ಥೆಯ ಅಲ್ಜೀರಿಯ ಸ್ಥಾಯೀ ಸಮಿತಿ, ಕಾಂಗೋ ಶಾಂತಿ ಸ್ಥಾಪನಾ ಸಮಿತಿ, ಹಣಕಾಸು ಅಭಿವೃದ್ಧಿ ಸಮಿತಿ - ಇವುಗಳ ಅಧ್ಯಕ್ಷರಾಗಿದ್ದರು.

	ಊ ಥಾಂಟರು ತಮ್ಮನ್ನು ಪ್ರಜಾತಂತ್ರಾತ್ಮಕ ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದರು.  ಅವರೊಬ್ಬ ಶಾಂತಿವಾದಿ,  ಪರಮಾಣು ಅಸ್ತ್ರ ನಿಷೇಧ ಬಯಸುತ್ತಿದ್ದರು.  ತಮ್ಮ ಅಭಿಪ್ರಾಯವನ್ನು ನಿರ್ಭಯವಾಗಿ ವ್ಯಕ್ತಪಡಿಸಲು ಹಿಂಜರಿಯುತ್ತಿರಲಿಲ್ಲ.  1957ರಲ್ಲಿ ಹಂಗರಿಯ ಚಳವಳಿಯನ್ನು ಅಡಗಿಸಲು ಸೋವಿಯೆತ್ ದೇಶ ಕೈಕೊಂಡ ಕ್ರಮವನ್ನು ವಿಶ್ವ ಸಂಸ್ಥೆಯಲ್ಲಿ ಇವರು ಖಂಡಿಸಿದರು.  ಕಾಂಗೋ ಹಗರಣದಲ್ಲಿ ವಿಶ್ವ ಸಂಸ್ಥೆ ಪ್ರವೇಶಿಸಬೇಕೆಂದು ವಾದಿಸಿದರು.  ಚೀನದ ಪ್ರಜಾಸರ್ಕಾರಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನ ಮನ್ನಣೆ ನೀಡಲು ನಿರಾಕರಿಸುತ್ತ ಬಂದದ್ದು ವಿಶ್ವದ ಹಲವು ರಾಜಕೀಯ ತೊಡಕುಗಳಿಗೆ ಕಾರಣವಾಗಿದೆ ಎಂಬುದು ಇವರ ಅಭಿಪ್ರಾಯವಾಗಿತ್ತು.  1961ರಲ್ಲಿ ಕ್ಯೂಬವನ್ನು ಪ್ರವೇಶಿಸಲು ಅಮೆರಿಕ ನಡೆಸಿದ ಹವಣಿಕೆ ಇವರ ಟೀಕೆಗೆ ಗುರಿಯಾಯಿತು.  ವಿಶ್ವಶಾಂತಿಗೆ ಧಕ್ಕೆ ತರುವಂಥ ಯಾವುದೇ  ಕಾರ್ಯವಿರಲಿ ಅದನ್ನು ಇವರು ನಿರ್ಭಯವಾಗಿ ಟೀಕಿಸುತ್ತಿದ್ದರು.

	ಥಾ ಎಂದರೆ ಬರ್ಮದ ಭಾಷೆಯಲ್ಲಿ ಪರಿಶುದ್ಧ ಎಂದು ಅರ್ಥ.  ಇವರಿಗೆ ಬರ್ಮ, ಅಮೆರಿಕ, ಸೋವಿಯೆತ್ ದೇಶ ಮತ್ತು ಇತರ ಹಲವು ರಾಷ್ಟ್ರಗಳ ವಿಶ್ವ ವಿದ್ಯಾಲಯಗಳು ಅನೇಕ ಗೌರವ ಪದವಿಗಳನ್ನಿತ್ತು ಸನ್ಮಾನಿಸಿದುವು.  ವಿಶ್ವಶಾಂತಿಗಾಗಿ ಇವರ ಸೇವೆಯನ್ನು ಮನ್ನಿಸಿ ಭಾರತ ಸರ್ಕಾರ ನೆಹರು ಅಂತರ ರಾಷ್ಟ್ರೀಯ ಅರಿವಿನ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು(1966).  1966ರಲ್ಲಿ ಇವರನ್ನು ಮಹಾ ಕಾರ್ಯದರ್ಶಿಯಾಗಿ ಸ್ಥಾನಕ್ಕೆ ಇನ್ನೊಂದು ಅವಧಿಗೆ ಆರಿಸಲಾಯಿತು.  1972ರ ಜನವರಿ 1 ರಂದು ಮಹಾ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತರಾದರು.  ಅನಂತರ ಇವರು ನ್ಯೂಯಾರ್ಕಿನಲ್ಲಿ ವಾಸಿಸುತ್ತಿದ್ದರು.  ಊ ಥಾಂಟ್ ಅವರು 1974ರ ನವೆಂಬರ್ 25 ರಂದು ತೀರಿಕೊಂಡರು.  ಅವರ ದೇಹವನ್ನು ಸ್ವದೇಶಕ್ಕೆ ತಂದು ರಂಗೂನಿನಲ್ಲಿ ಅಂತ್ಯ ಸಂಸ್ಕಾರ  ನಡೆಸಲಾಯಿತು.

ವಿಶ್ವ ಸಂಸ್ಥೆ, ವಿಶ್ವ ಶಾಂತಿ, ಬರ್ಮದ ಶಿಕ್ಷಣ ಪದ್ಧತಿ ಮೊದಲಾದ ವಿಷಯಗಳನ್ನು ಕುರಿತು ಇವರು ಪುಸ್ತಕಗಳನ್ನು ಬರೆದಿದ್ದಾರೆ.   ಇವರು 1957 - 1963ರ ಅವಧಿಯಲ್ಲಿ ಮಾಡಿದ ಭಾಷಣಗಳನ್ನು ಮತ್ತು ಬರೆದ ಪ್ರಬಂಧಗಳನ್ನು ಸಂಕಲಿಸಿ ಟುವರ್ಡ್ ವಲ್ರ್ಡ್ ಪೀಸ್ (1964) ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ.                 
 (ವಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ